Articles Category

ಸಾವಯವ ಕೃಷಿ ಪ್ರೋತ್ಸಾಹಕ್ಕೆ ಸರ್ಕಾರದ ಯೋಜನೆಗಳು ! Government Schemes To Promote Organic Farming

Government Schemes To

ಸಾವಯವ ಕೃಷಿ ಪ್ರೋತ್ಸಾಹಕ್ಕೆ ಸರ್ಕಾರದ ಯೋಜನೆಗಳು ! Government Schemes To Promote Organic Farming

ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಔಷಧೋಪಚಾರಗಳಿಲ್ಲದೆ, ಸಹಜವಾಗಿ ಬೆಳೆದ ಉತ್ಪನ್ನಗಳನ್ನು ಸಂತೆಗಳಲ್ಲಿ ರೈತರು ಮಾರುವ ಕಾಲವೊಂದಿತ್ತು. ಆದರೆ ಆಧುನಿಕ ಜೀವನ ಶೈಲಿ, ಬದಲಾದ ಆಹಾರ ಕ್ರಮ ಮತ್ತು ಹೆಚ್ಚಿದ ಬೇಡಿಕೆ, ಮುಂತಾದ ಕಾರಣಗಳಿಂದಾಗಿ ಕಡಿಮೆ ಅವದಿಯಲ್ಲಿ ಬೆಳೆ ಬೆಳೆಯಲು ಯಥೇಚ್ಚವಾಗಿ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸಲಾಗುತ್ತಿದೆ. ಅಷ್ಟೇ ಅಲ್ಲದೇ, ಹಣ್ಣು ತರಕಾರಿಗಳನ್ನು ಬಿಗ್ ಮಾರ್ಕೆಟ್, ಮಾಲ್ ಇನ್ನಿತರ ಕಡೆ ಖರೀದಿ ಮಾಡುವ ಪರಿಪಾಠವೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ, ಸಹಜ ಮತ್ತು ಸಾವಯವ ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡುವ ಜೊತೆಗೆ ರೈತರಿಗೆ ವೇದಿಕೆ ಕಲ್ಪಿಸುವ ಸಲುವಾಗಿ ಹಲವಾರು ಯೋಜನೆಗಳನ್ನು ಸರಕಾರ ಹಮ್ಮಿಕೊಂಡಿದೆ. 

ಈಗಿನ ಆಧುನಿಕ ಯುಗದಲ್ಲಿ, ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ತಪ್ಪಿಸುವುದು ದೊಡ್ಡ ಸವಾಲೇ ಸರಿ. ಸಹಜ ಕೃಷಿ ವಿಧಾನದಲ್ಲಿ ಸುಧಾರಣೆ ತರಲು, ಹಾಗೂ ಈ ಪದ್ದತಿಯನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿಸಲು, ಕೃಷಿ ವಿಜ್ಞಾನಿಗಳು ಸತತವಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು. ರಾಸಾಯನಿಕಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ದೇಶೀಯ ಪದ್ಧತಿಯನ್ನು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳುವಲ್ಲಿ ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ.

ಹಾಗಾಗಿ, ಸಹಜ ಹಾಗೂ ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳುವ ರೈತರನ್ನು ಉತ್ತೇಜಿಸಲು ಹಾಗೂ ಅವರಿಗೆ ಆರ್ಥಿಕವಾಗಿ ನೆರವಾಗಲು ಸರ್ಕಾರವು ಹೊಸ ಹೊಸ ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳಡಿಯಲ್ಲಿ ಸಾವಯವ ದೃಢೀಕರಣವನ್ನು ರಾಜ್ಯ ಸರ್ಕಾರದ ಅಂಗಸಂಸ್ಥೆಯಾದ ‘ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆ’ (ಕೆಎಸ್‌ಒಸಿಎ) ಮೂಲಕ ಮಾಡಲಾಗುತ್ತದೆ. ದೃಢೀಕರಣ ಮಾಡುವ ಮೂಲಕ ರೈತರಿಗೆ ಮಾರುಕಟ್ಟೆ ಒದಗಿಸಿಕೊಡುವ ಮಹತ್ವದ ಉದ್ದೇಶವನ್ನು ಸರ್ಕಾರ ಹೊಂದಿದೆ.  ಸರ್ಕಾರದ ಯೋಜನೆಗಳಿಗಾಗಿ ಎಷ್ಟು ಮಂದಿ ಬೇಕಾದರೂ ಅರ್ಜಿ ಸಲ್ಲಿಸಬಹುದು, ಅವುಗಳನ್ನು ಮುಂದಿನ ಪ್ರಕ್ರಿಯೆಗಾಗಿ ಕಳುಹಿಸಿಕೊಡಲಾಗುವುದು. ರೈತನೇ ಫಲಾನುಭವಿಯಾಗಿದ್ದಲ್ಲಿ ಕನಿಷ್ಠ ಒಂದು ಎಕರೆ ಹಿಡುವಳಿ ಜಮೀನನ್ನು ಹೊಂದಿರಬೇಕು. ಸಂಘ ಸಂಸ್ಥೆಗಳ ಪ್ರಸ್ತಾವವಾಗಿದ್ದಲ್ಲಿ ಗುಚ್ಛ ಮಾದರಿಯಲ್ಲಿ ಕನಿಷ್ಠ 50 ಹೆಕ್ಟೇರ್‌ ಜಮೀನಿರಬೇಕು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ. ಸಹಜ ಕೃಷಿ ಅನುಸರಣೆಗಾಗಿ ಶೇ 75ರಷ್ಟು ಸಹಾಯಧನವೂ ದೊರೆಯಲಿದೆ. 

ಅದೇ ರೀತಿ, ಜೋಡಿ ಅಂಕಣದ ಎರೆಹುಳು ತೊಟ್ಟಿ ನಿರ್ಮಾಣಕ್ಕೆ 22ಸಾವಿರ ಘಟಕ ವೆಚ್ಚವಾಗುತ್ತದೆ ಎನ್ನುವ ಅಂದಾಜಿದ್ದು, ಇದಕ್ಕಾಗಿ 16500 ಸಹಾಯಧನ ದೊರೆಯುತ್ತದೆ. ಜೈವಿಕ ಗೊಬ್ಬರ ತಯಾರಿಕಾ ಘಟಕಕ್ಕೆ 52ಸಾವಿರ ನಿಗದಿಪಡಿಸಲಾಗಿದ್ದು, 39ಸಾವಿರ ಸಹಾಯ ಧನ ದೊರೆಯುತ್ತದೆ. ಹಾಗೇ 2 ಜಾನುವಾರು ನಿಲ್ಲುವ ಕೊಟ್ಟಿಗೆ ನಿರ್ಮಾಣಕ್ಕೆ 12ಸಾವಿರ ನಿಗದಿಪಡಿಸಲಾಗಿದ್ದು, 9ಸಾವಿರದಷ್ಟು ಸಹಾಯಧನ ದೊರೆಯುತ್ತದೆ. ಹೀಗೆ ಸಹಾಯಧನ ನೀಡುವ ಮೂಲಕ, ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ,  ಅವುಗಳ ಬದಲಿಗೆ ಎರೆಹುಳು ಗೊಬ್ಬರ, ಜೈವಿಕ ಗೊಬ್ಬರ ಅಥವಾ ಸಗಣಿ ಮೊದಲಾದವುಗಳನ್ನು ಭೂಮಿಗೆ ಹಾಕುವಂತೆ ಪ್ರೇರೇಪಿಸಲಾಗುತ್ತಿದೆ. 

ಸಾವಯವ ದೃಢೀಕರಣ ಪಡೆದವರು, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಸಹಾಯವಾಗಲಿದೆ. ಜಿಲ್ಲಾ ಪ್ರಾಂತ ಸಾವಯವ ಕೃಷಿಕರ ಸಂಘಗಳ ಒಕ್ಕೂಟದಲ್ಲಿ ಜಿಲ್ಲೆಯ ಸಾವಯವ ಕೃಷಿಕರು ನೋಂದಾಯಿಸಿ ಸದಸ್ಯರಾಗಬಹುದು. ಸಾವಯವ ಕೃಷಿಯಲ್ಲಿ ತರಕಾರಿ, ಕಾಳುಗಳು, ಗೋಧಿ, ಭತ್ತ ಮೊದಲಾದವುಗಳನ್ನು ರೈತರು ಬೆಳೆಯಬಹುದು, ಕೆಲವರು ಸಾವಯವ ಬೆಲ್ಲವನ್ನೂ ಉತ್ಪಾದನೆ ಮಾಡುತ್ತಿದ್ದಾರೆ. ಈ ರೈತರಿಗೆ ಮಾರುಕಟ್ಟೆ ಒದಗಿಸಲು ಯೋಜನೆ ರೂಪಿಸಲಾಗಿದೆ.  

ಸಾವಯವ ಕೃಷಿಗೆ ಪ್ರೋತ್ಸಾಹ ನೀಡಲೆಂದು ಕೇಂದ್ರ ಸರ್ಕಾರ ‘ಪರಂಪರಾಗತ ಕೃಷಿ ವಿಕಾಸ ಯೋಜನೆ’ ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಹೆಕ್ಟೇರ್‌ ಭೂಮಿಯಲ್ಲಿ ಸಾವಯವ ಕೃಷಿ ಕೈಗೊಳ್ಳಲು ಪ್ರೋತ್ಸಾಹ ಧನ ನೀಡಲಾಗುತ್ತದೆ. 2015 ರಲ್ಲಿ ಆರಂಭಿಸಲಾದ ಈ ಯೋಜನೆಯಡಿ ಪ್ರತಿ ರೈತರಿಗೆ 50 ಸಾವಿರ ರೂಪಾಯಿ ನೆರವುನೀಡಲಾಗುತ್ತಿದೆ. ಈ ಯೋಜನೆಯ ಮಹತ್ವ, ಅರ್ಜಿ ಸಲ್ಲಿಕೆ, ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತೆಗಳು, ಮುಂತಾದ ಮಾಹಿತಿ ಇಲ್ಲಿದೆ.

ಕೇಂದ್ರ ಸರ್ಕಾರವು, ವಿಶೇಷವಾಗಿ ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದಕ್ಕಾಗಿ 2015ರಲ್ಲಿ ಈ ಯೋಜನೆಯನ್ನು ಆರಂಭಿಸಿದೆ. ಇದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ರಾಷ್ಟ್ರೀಯ ಮಣ್ಣು ಫಲವತ್ತತೆ ಮಿಷನ್‌(SHM), ನ್ಯಾಷನಲ್ ಸುಸ್ಥಿರ ಕೃಷಿ ಮಿಷನ್ (NMSA)ನಡಿ ಜಾರಿ ಮಾಡುತ್ತಿರುವ ಅತಿ ಮುಖ್ಯವಾದ ಯೋಜನೆಯಾಗಿದೆ. ಈ ಯೋಜನೆಯಡಿ 50 ಜನ ರೈತರು, ಅಥವಾ ಅದಕ್ಕಿಂತ ಹೆಚ್ಚು ರೈತರು 50 ಎಕರೆ ಜಮೀನು ಹೊಂದಿರುವ ಒಂದು ಕ್ಲಸ್ಟರ್ ರಚಿಸುವ ಮೂಲಕ ಸಾವಯವ ಕೃಷಿ ಕೈಗೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ.

ಈ ಯೋಜನೆಯಡಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರಕಾರ ಕ್ರಮವಾಗಿ 60:40 ಅನುಪಾತದಲ್ಲಿ ಅನುದಾನ ನೀಡುತ್ತಿವೆ. ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯ ರಾಜ್ಯಗಳಿಗೆ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ 90:10 ಅನುಪಾತದಲ್ಲಿ ಅನುದಾನ ನೀಡುತ್ತವೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಶೇ.100ರಷ್ಟು ಅನುದಾನವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

ಹಾಗೇ, ಈ ಯೋಜನೆಯಡಿ ಪ್ರತಿ ರೈತರಿಗೆ ಮೂರು ವರ್ಷಗಳ ಕಾಲ 50 ಸಾವಿರ ರೂಪಾಯಿ ಸಹಾಯಧನವನ್ನು ನೀಡಲಾಗುತ್ತದೆ. ಉದಾಹರಣೆಗೆ: ಸಾವಯವ ಗೊಬ್ಬರ, ಸಾವಯವ ಕೀಟನಾಶಕ, ಎರೆಹುಳು ಗೊಬ್ಬರ ಇತ್ಯಾದಿ ಗಳನ್ನು ಕೊಳ್ಳಲು ಶೇ. 61 ರಷ್ಟು ಎಂದರೆ ಸುಮಾರು 31,000 ರೂಪಾಯಿಯಷ್ಟು ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. 

ಇನ್ನು, ಸಾವಯವ ಕೃಷಿಗೆ ಪ್ರಮಾಣ ಪತ್ರ ಪಡೆಯಲು, ಏಜೆಂಟ್ ಮೂಲಕ ಅರ್ಜಿ ಸಲ್ಲಿಸಬೇಕು. ಪಿಕೆವಿವೈ ಅಡಿಯಲ್ಲಿ, ಸಾವಯವ ಗ್ರಾಮವನ್ನು ಕ್ಲಸ್ಟರ್ ವಿಧಾನ ಮತ್ತು ಪಿಜಿಎಸ್ ಪ್ರಮಾಣೀಕರಣದ ಮೂಲಕ ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲಾಗುತ್ತದೆ. PGS ಎಂಬುದು ಸಾವಯವ ಉತ್ಪನ್ನಗಳನ್ನು ಪ್ರಮಾಣೀಕರಣ ಮಾಡುವ ಪ್ರಕ್ರಿಯೆಯಾಗಿದ್ದು, ಗುಣಮಟ್ಟದ ದರ್ಜೆಗನುಗುಣವಾಗಿ ಅವುಗಳ ಉತ್ಪಾದನೆಯಾಗುತ್ತಿದೆ ಎಂಬುದನ್ನು ಖಚಿತಪಡಿಸುತ್ತದೆ. ಹೀಗೇ ಸರ್ಕಾರದ ಯಾವುದೇ ಯೋಜನೆಯ ಮುಖ್ಯ ಉದ್ದೇಶದಿಂದ ಎಂದರೆ, ಸಾವಯವ ಕೃಷಿ ಕೈಗೊಳ್ಳಲು ರೈತರನ್ನು ಉತ್ತೇಜಿಸುವುದು ಹಾಗೂ ರೈತರಿಗೆ ಸಾವಯವ ಕೃಷಿ ಮಾಡಲು ಆರ್ಥಿಕ ನೆರವು ನೀಡುವುದು. ಈ ಯೋಜನೆಯು ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಹ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಪರಂಪರಾಗತ್ ಕೃಷಿ ವಿಕಾಸ ಯೋಜನೆ ಮೂಲಕ ಕೈಗೊಳ್ಳುವ ಸಾವಯವ ಕೃಷಿಯಲ್ಲಿ, ಕಡಿಮೆ ಕೀಟನಾಶಕಗಳನ್ನು ಬಳಸುವುದರಿಂದ ರಾಸಾಯನಿಕ ಮುಕ್ತ ಮತ್ತು ಪೌಷ್ಟಿಕ ಆಹಾರದ ಉತ್ಪಾದನೆ ಸಾಧ್ಯವಾಗುತ್ತದೆ. ಅದೇ ರೀತಿ, ಪರಂಪರಾಗತ್ ಕೃಷಿ ವಿಕಾಸ ಯೋಜನೆಯು ದೇಶದ ನಾಗರಿಕರ ಆರೋಗ್ಯವನ್ನು ಸುಧಾರಿಸುವಲ್ಲಿ ಕೂಡ ಸಹಕರಿಸುತ್ತದೆ. ಹಾಗೇ, ಕ್ಲಸ್ಟರ್ ವಿಧಾನದಲ್ಲಿ ಸಾವಯವ ಕೃಷಿ ಉತ್ತೇಜಿಸುವ ಉದ್ದೇಶದಿಂದ ಕೂಡ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಯೋಜನೆಯ ಸಾರಾಂಶ ಹೀಗಿದೆ. 

ಮುಖ್ಯವಾಗಿ, ಭಾರತ ಸರ್ಕಾರದಿಂದ ಪರಂಪರಾಗತ್ ಕೃಷಿ ವಿಕಾಸ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮಣ್ಣು ಮತ್ತು ಆರೋಗ್ಯ ಯೋಜನೆಯಡಿ ಈ ಯೋಜನೆ ಆರಂಭಿಸಲಾಗಿದೆ. ಈ ಯೋಜನೆಯ ಮೂಲಕ ಸಾವಯವ ಕೃಷಿ ಮಾಡಲು ರೈತರಿಗೆ ಉತ್ತೇಜನ ನೀಡಲಾಗಿದೆ. ಸಾವಯವ ಕೃಷಿಗೆ ಪ್ರೋತ್ಸಾಹಿಸಲು ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಪರಪರಾಗತ ಕೃಷಿ ವಿಕಾಸ ಯೋಜನೆಯಡಿ ಸಾವಯವ ಕೃಷಿಗೆ 3 ವರ್ಷಕ್ಕೆ ಪ್ರತಿ ಹೆಕ್ಟೇರ್‌ಗೆ ರೂ.50000 ಧನಸಹಾಯ ನೀಡಲಾಗುವುದು. ಈ ಮೊತ್ತದಲ್ಲಿ ಸಾವಯವ ಗೊಬ್ಬರಗಳು, ಕೀಟನಾಶಕಗಳು, ಬೀಜಗಳು ಇತ್ಯಾದಿಗಳಿಗೆ ಪ್ರತಿ ಹೆಕ್ಟೇರ್‌ಗೆ ರೂ.31000 ನೀಡಲಾಗುತ್ತದೆ. ಮೌಲ್ಯವರ್ಧನೆ ಮತ್ತು ವಿತರಣೆಗೆ ರೂ. 8800 ನೀಡಲಾಗುವುದು. ಇದಲ್ಲದೇ ಕ್ಲಸ್ಟರ್ ರಚನೆ ಮತ್ತು ಸಾಮರ್ಥ್ಯ ನಿರ್ಮಾಣಕ್ಕೆ ಪ್ರತಿ ಹೆಕ್ಟೇರ್‌ಗೆ ರೂ. 3000 ನೀಡಲಾಗುವುದು. ಈ ಯೋಜನೆಯಡಿ ಲಾಭದ ಹಣವನ್ನು, ನೇರ ಲಾಭ ವರ್ಗಾವಣೆಯ ಮೂಲಕ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಅದೇ ರೀತಿ, ಸಹಜ ಮತ್ತು ಸಾವಯವ ಕೃಷಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದ್ದು, ಸುಮಾರು 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೈಸರ್ಗಿಕ ಕೃಷಿಯನ್ನು ಕೈಗೊಳ್ಳಲಾಗಿದೆ. ಜೊತೆಗೆ, ಸಾವಯವ ಉತ್ಪನ್ನಗಳ ರಫ್ತಿಗೂ ಪ್ರಾಮುಖ್ಯತೆ ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಪ್ರಗತಿಯನ್ನೂ ಪರಿಷ್ಕರಿಸುವುದು, ಹಾಗೇ ಸಧ್ಯ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 37 ಕೋಟಿ ರೈತರು ನೊಂದಾಯಿಸಿಕೊಂಡಿದ್ದಾರೆ. ಈ ಯೋಜನೆಗಳು ಪಾರದರ್ಶಕವಾಗಿದ್ದು, ರೈತರನ್ನು ನೇರವಾಗಿ ತಲುಪಬೇಕು ಎಂಬುದು ನರೇಂದ್ರ ಮೋದಿಯವರ ಆಶಯವಾಗಿದೆ. ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೂ ಕೇಂದ್ರ ಆದ್ಯತೆ ನೀಡುತ್ತಿದ್ದು, ಶೀತಲ ಕೇಂದ್ರ ಹಾಗೂ ಗೋದಾಮುಗಳನ್ನು ನಿರ್ಮಿಸಲಾಗುತ್ತಿದೆ.

ಪರಂಪರಾಗತ ಕೃಷಿ ವಿಕಾಸ ಯೋಜನೆಯ ಕುರಿತು, ಹಾಗೂ ಈ ಯೋಜನೆಯಡಿಯಲ್ಲಿ ರೈತರು ಲಾಭ ಹೇಗೆ ಪಡೆದುಕೊಳ್ಳಬೇಕೆಂಬುದರ ಕುರಿತು ಮಾಹಿತಿ ಪಡೆಯಲು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು. ನಿಮ್ಮ ತಾಲೂಕಿನ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯಿಂದಲೂ ಈ ಯೋಜನೆ ಕುರಿತು ಮಾಹಿತಿ ಪಡೆಯಬಹುದು.

ಸಾವಯವ ಕೃಷಿಯಲ್ಲಿ ಇಳುವರಿ ಹೆಚ್ಚಿಸುವುದು ಹೇಗೆ. ? How to increase yield in organic farming?

ದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ.

Leave a Reply

Your email address will not be published. Required fields are marked *